Skip to main content

ಎಸ್ಟೋನಿಯಾ ದೇಶದ ಕವಿ ಡೊರಿಸ್ ಕರೆವಾ–ರವರ ಆರು ಕವನಗಳು SIX POEMS BY THE ESTONIAN POET DORIS KAREVA TRANSLATED INTO KANNADA



19 MAY 2023

ʻಎಸ್ಟೋನಿಯನ್ ಮಹಿಳಾ ಕಾವ್ಯದ ಸಶಕ್ತ ಸಂಪ್ರದಾಯದಲ್ಲಿ ಡೊರಿಸ್ ಕರೆವಾ ಅವರು ಹೊಳೆಯುವ ಮುತ್ತಿನಂತೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆʼ ಎಂದು ಡೊರಿಸ್ ಕರೆವಾ ಅವರ ಬಗ್ಗೆ ಹೇಳುವುದು ಸುಲಭ. ಹೀಗೆ ಹೇಳಿದರೆ, ಡೊರಿಸ್ ಕರೆವಾ ಅವು ಒಬ್ಬ ಉತ್ತಮ ಕವಿ ಎಂದು ಸಾಧಾರಣವಾಗಿ ಹೇಳಿದಂತಾಗುತ್ತದೆ. ಡೊರಿಸ್ ಕರೆವಾ ಅವರು ಪದಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿದಿರುವ ಪ್ರವೀಣೆ ಹಾಗೂ ಎಸ್ಟೋನಿಯಾದ ಪ್ರೀತಿಯ ಕವಯತ್ರಿಯರಲ್ಲಿ ಒಬ್ಬರು, ಎಂದು ಹೇಳಿದರೆ ಅದು ಸತ್ಯಕ್ಕೆ ಹತ್ತಿರವಾದ ಮಾತು.

ಡೊರಿಸ್ ಕರೆವಾ ಅವರು 1958ರಲ್ಲಿ ಜನಿಸಿದರು. 1983ರಲ್ಲಿ ಅವರು ಟಾರ್ಟು ವಿಶ್ವವಿದ್ಯಾಲಯದಿಂದ ರೋಮನ್ – ಜರ್ಮಾನಿಕ್ ಭಾಷಾಶಾಸ್ತ್ರದಲ್ಲಿ ಪದವಿ ಪಡೆದರು. 1978-1993 ಮತ್ತು 1997-2002ರವರೆಗೆ ಅವರು ಸಾಂಸ್ಕೃತಿಕ ಸಾಪ್ತಾಹಿಕ ‘ಸಿರ್ಪ್‌’ ಗಾಗಿ (Sirp) ಕೆಲಸ ಮಾಡಿದರು. ಸಾಹಿತ್ಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಅವರು ಹದಿನಾರು ವರ್ಷಗಳ ಕಾಲ (1992-2008) UNESCOಗಾಗಿ ಎಸ್ಟೋನಿಯನ್ ರಾಷ್ಟ್ರೀಯ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಕರೆವಾ ಅವರ ಕಾವ್ಯದ ಗಮನಾರ್ಹ ಲಕ್ಷಣವೆಂದರೆ ರೂಪಕ್ಕೆ ಕಟ್ಟುನಿಟ್ಟಾದ ಅನುಸರಣೆ. ಆದಷ್ಟು ಕಡಿಮೆ ಪದಗಳನ್ನು ಬಳಸುವುದು ಕರೆವಾ ಅವರ ವಿಧಾನವಾಗಿದೆ. ಹೀಗಿದ್ದೂ, ಆಶ್ಚರ್ಯವೆಂಬಂತೆ ಅವರು ಹೇಳಬಯಸುವ ಸಂದೇಶ ಸ್ಪಷ್ಟವಾಗಿ ಹಾಗೂ ಬಹುಅರ್ಥಗಳೊಂದಿಗೆ ಮೂಡಿಬರುತ್ತದೆ. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಇಷ್ಟೊಂದು ಅರ್ಥಗಳು ಬರುವಾಗ ಸ್ವಲ್ಪಮಟ್ಟಿನ ಅಸ್ಪಷ್ಟತೆ ಉಂಟಾಗಬಹುದು: ಈ ಅಸ್ಪಷ್ಟತೆಯಿಂದ ಮೂಡಿಬರುವ ಅರ್ಥದ ಸುಳಿವು ಅತ್ಯಂತ ಪ್ರಕಾಶಮಾನವಾಗಿ ಕಂಡುಬರುತ್ತದೆ, ಪ್ರವಾದಿಯ ವಾಣಿಯಂತೆ.

ಆದರೆ ಕರೆವಾ ಅವರ ಕಾವ್ಯವು ಶೈಲಿಯ ಮಟ್ಟದಲ್ಲಿ ಮಾತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದಿಲ್ಲ. ಪದಗಳ ಬಳಕೆ ಕಡಿಮೆಯಾದರೂ ಅವು ಸಾರುವ ಸಂದೇಶ ಗಹನವಾಗಿರುತ್ತದೆ. ಸೌಂದರ್ಯದ ಬಲಿಪೀಠದ ಮೇಲೆ ಆಗಾಗ್ಗೆ ಕಾವ್ಯದ ಸಂದೇಶವನ್ನು ತ್ಯಾಗ ಮಾಡುತ್ತಾರೆಂದು ಕರೆವಾ ಅವರ ಮೇಲೆ ಟೀಕೆಯಿದೆ. ಅದೇನೇ ಇದ್ದರೂ, ಕರೇವಾ ಅವರ ಕಾವ್ಯದ ಸಂದೇಶವನ್ನು ಭೌತಿಕವಾಗಿ ಗ್ರಹಿಸಿದಷ್ಟು ಈಗ ಬರೆಯುತ್ತಿರುವ ಬೇರಾವ ಎಷ್ಟೋನಿಯನ್ ಕವಿಯ ಕಾವ್ಯದ ಸಂದೇಶವನ್ನು ಗ್ರಹಿಸಲಸಾಧ್ಯ. ಕರೇವಾ ಅವರ ಕಾವ್ಯಸಂದೇಶಕ್ಕೆ ಆ ನೈತಿಕ ಶಕ್ತಿಯಿದೆ. ಅವರು ಈವರೆಗೆ ಹದಿನಾರು ಕವನಸಂಕಲನಗಳನ್ನು ಮತ್ತು ಒಂದು ಪ್ರಬಂಧ ಸಂಕಲನವನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯಪಯಣದ ಮೊದಲಾರ್ಧದಲ್ಲಿ, ಚೊಚ್ಚಲ ಸಂಗ್ರಹವಾದ ʻಪೇವಾಪಿಲ್ಡಿಡ್ʼ Päevapildid  (ಛಾಯಾಚಿತ್ರಗಳು, 1978)ರಿಂದ ʻವರಿ ಜ ವಿವ್ʼ Vari ja viiv  (ನೆರಳು ಮತ್ತು ತತ್‌ಕ್ಷಣ, 1986) ಸಂಗ್ರಹದವರೆಗೆ ಒಂಬತ್ತು ವರ್ಷಗಳ ಅವಧಿಯಲ್ಲಿ ಐದು ಕವನಸಂಗ್ರಹಗಳನ್ನು ಒಳಗೊಂಡಿದೆ. ಅವರ ಹೊಸ ಕವಿತೆಗಳನ್ನ ಒಳಗೊಂಡಿದೆ, ಆಯ್ದ ಕವಿತೆಗಳ ಸಂಗ್ರಹ ʻಆರ್ಮುಯೇಗ್ʼ Armuaeg (ಟೈಮ್ ಆಫ್ ಗ್ರೇಸ್, 1991), ಮತ್ತು ʻಮಾಂಡ್ರಗೋರಾʼ Mandragora (ಮ್ಯಾಂಡ್ರೇಕ್, 2002) ಸಂಗ್ರಹದ ನಡುವೆ ಹನ್ನೆರಡು ವರ್ಷಗಳ ಅವಧಿಯಲ್ಲಿ ನಾಲ್ಕು ಸಂಗ್ರಹಗಳು ಕಾಣಿಸಿಕೊಂಡವು. ʻಮಾಂಡ್ರಗೋರಾʼ ಮತ್ತು ಅದರ ಹಿಂದಿನ ʻಹಿಂಗ್ರಿಂಗ್ʼ Hingring (ಸೋಲ್ ಸರ್ಕಲ್, 1997) ನಡುವೆ ಐದು ವರ್ಷಗಳ ಅಂತರವಿದೆ. 2008ರಲ್ಲಿ ʻಡೆಕಾʼ Deka ಪ್ರಕಟವಾಯಿತು. ಇದು 1975-2007ರ ಅವಧಿಯ ಹೊಸ ಮತ್ತು ಈಗಾಗಲೇ ಪ್ರಕಟವಾದ ಕವಿತೆಗಳ ಸಂಗ್ರಹ.

ಕರೆವಾ ಅವರು ಅನುವಾದ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ಅನಾ ಅಖ್ಮತೋವಾ, ಎಮಿಲಿ ಡಿಕಿನ್ಸನ್, ಜೋಸೆಫ್ ಬ್ರಾಡ್ಸ್ಕಿ, ಕಹ್ಲಿಲ್ ಜಿಬ್ರಾನ್, ಕಬೀರ್, W..H.. ಆಡೆನ್, ಸ್ಯಾಮ್ಯುಯೆಲ್ ಬೆಕೆಟ್, ಶೇಕ್ಸ್ಪಿಯರ್ ಮತ್ತು ಐರಿಶ್ ಸಮಕಾಲೀನ ಕವನಗಳನ್ನು ಎಸ್ಟೋನಿಯನ್ ಭಾಷೆಗೆ ಅನುವಾದಿಸಿದ್ದಾರೆ. ಕರೆವಾ ಅವರ ಕವನಗಳನ್ನು 20 ಭಾಷೆಗಳಿಗೆ ಅನುವಾದಿಸಲಾಗಿದೆ ಹಾಗೂ ಅವರ ಕವನಗಳು ಎಸ್ಟೋನಿಯಾ ಮತ್ತು ವಿದೇಶಗಳಲ್ಲಿ ಸಂಗೀತಗಾರರನ್ನು, ಸಂಯೋಜಕರನ್ನು, ಮತ್ತು ನಿರ್ದೇಶಕರನ್ನು ಪ್ರೇರೇಪಿಸಿದೆ. ಕರೆವಾ ಅವರನ್ನು ಎರಡು ರಾಷ್ಟ್ರೀಯ ಸಾಂಸ್ಕೃತಿಕ ಪ್ರಶಸ್ತಿಗಳು ಮತ್ತು ನಾಲ್ಕು ಸಾಹಿತ್ಯ ಪ್ರಶಸ್ತಿಗಳೊಂದಿಗೆ ಗೌರವಿಸಲಾಗಿದೆ; 2001ರಲ್ಲಿ ಆಕೆಗೆ ʻಎಸ್ಟೋನಿಯನ್ ಆರ್ಡರ್ ಆಫ್ ದಿ ವೈಟ್ ಸ್ಟಾರ್ʼ ʻEstonian Order of the White Starʼ ನೀಡಲಾಯಿತು.

ಇಲ್ಲಿ ಅನುವಾದಿಸಿರುವ ಆರು ಕವನಗಳಲ್ಲಿ ಮೊದಲ ಕವನವನ್ನು ಟೀನಾ ಅಲೆಮನ್ ಅವರು (Tiina Aleman), ಹಾಗೂ ಉಳಿದ ಐದು ಕವನಗಳನ್ನು ಮಿರಿಯಮ್ ಮ್ಯಾಕ್‌ಇಲ್ಫಾಟ್ರಿಕ್ – ಕ್ಸೆನೊಫೊಂಟೊವ್ ಅವರು (Miriam McIlfatrick-Ksenofontov) ಎಸ್ಟೋನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

LINK TO MY KANNADA TRANSLATIONS OF DORIS KAREVA'S POEMS PUBLISHED IN AVADHI MAG:

 

Comments

Popular posts from this blog

ಐದು ಸಮಕಾಲೀನ ಗ್ರೀಕ್ ಕವನಗಳು - FIVE CONTEMPORARY GREEK POEMS - TRANSLATED INTO KANNADA

ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯೂರೊಪಿಯನ್ ಯೂನಿಯನ್‌ನಿಂದ ತೆಗೆದುಕೊಂಡ ಸಾಲಗಳನ್ನು ಪೂರೈಸಲಾಗದೇ, ಗ್ರೀಸ್ ಸಾಲದ ಕೂಪಕ್ಕೆ ಬಿತ್ತು. ದಿವಾಳಿಯಾಗುತ್ತಿರುವ ದೇಶವನ್ನು ಪಾರು ಮಾಡಲು ಯೂರೊಪಿಯನ್ ಯೂನಿಯನ್ ಮತ್ತೆ ದೊಡ್ಡ ಮೊತ್ತದ ಸಾಲ ನೀಡಲು ಒಪ್ಪಿತ್ತು. ಆದರೆ, ಈ ಸಾಲದ ಪ್ರತಿಯಾಗಿ ಗ್ರೀಸ್ ಸರ್ಕಾರವು ದೇಶದೊಳಗೆ ‘ಕಠಿಣ ಆರ್ಥಿಕ ಕ್ರಮಗಳನ್ನ’ ತೆಗೆದುಕೊಳ್ಳಬೇಕೆಂದು ಯೂರೊಪಿಯನ್ ಯೂನಿಯನ್ ನಿರ್ದೇಶಿಸಿತು.  ಗ್ರೀಸ್ ಸರ್ಕಾರವು ತನ್ನ ಜನಹಿತ ಪುರೊಭಿವೃದ್ಧಿ ಖರ್ಚುಗಳನ್ನು ಕಡಿಮೆ ಮಾಡಿತ್ತು. ಪೆನ್ಶನ್ ಮೊಟಕುಗೊಳಿಸಲಾಯಿತು, ತೆರಿಗೆ ಹೆಚ್ಚಿಸಲಾಯಿತು, ನಿರುದ್ಯೋಗ ಹೆಚ್ಚಿತು, ವಿದ್ಯುತ್ ಹಾಗೂ ನೀರಿನ ಅಭಾವ, ಯುವಜನರು ಹೊಟ್ಟೆಪಾಡಿಗಾಗಿ ದೇಶ ಬಿಟ್ಟು ಹೋದರು, ಬಡತನ ಹೆಚ್ಚುತ್ತಾ ಹೊಯಿತು – ಹೀಗೆ ಕಳೆದ ೧೦-೧೫ ವರ್ಷದಿಂದ ಗ್ರೀಸ್‌ ದೇಶದ ಕುಸಿದ ಆರ್ಥಿಕ ಸ್ಥಿತಿಯಿಂದ ಉಂಟಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳ ಸಂಧಿಗ್ಧತೆಯ ಮಧ್ಯೆ ಕಾವ್ಯಸ್ಪಂದನವಾಗಿ ಹುಟ್ಟಿದ ಕವನಗಳಿವು. ಪುರಾತನ ಗ್ರೀಕ್ ಕಾವ್ಯ, ಗ್ರೀಕ್ ಪುರಾಣ, ಆಧುನಿಕ ಕಾವ್ಯ, ಇವೆಲ್ಲರ ಅಡಿಪಾಯದ ಮೇಲೆ ವೇಗವಾಗಿ ಬದಲಾಗುತ್ತಿರುವ ಗ್ರೀಸ್ ದೇಶ...

ತಾದೆಉಷ್ ರೂಜ಼ಾವೀಚ್-ರ ಐದು ಕವನಗಳು - FIVE POEMS BY THE POLISH POET TADEUSZ ROZEWICZ TRANSLATED INTO KANNADA

ಪೋಲೆಂಡ್ ದೇಶಕ್ಕೆ  1918 ರಲ್ಲಿ    ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆ ಉಷ್ ರೂಜ಼ಾವೀಚ್.   1921 ರಲ್ಲಿ ಜನಿಸಿದ  ರೂಜ಼ಾವೀಚ್ ರು, ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ತಮ್ಮ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು.  ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅವರು ಬಡಗಿ, ಉಗ್ರಾಣನೌಕರ, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.  ಇದೇ ಯುದ್ಧದ ಸಮಯದಲ್ಲಿ ಅವರು ಭೂಗತ ಸೈನ್ಯಶಾಲೆಯಲ್ಲಿ ತರಭೇತಿ ಪಡೆದು ಪೋಲಂಡಿನ ಭೂಗತ “ಹೋಮ್ ಆರ್ಮಿ” ಯಲ್ಲಿ ಸುಮಾರು  1943 ರಿಂದ  1944 ವರೆಗೂ ಜರ್ಮನಿಯ ಸೈನ್ಯದ ವಿರುದ್ಧ ಹೋರಾಡಿದರು.     ಈ  ಸಮಯದಲ್ಲಿ ಅವರು ಕವನಗಳನ್ನು ಬರೆಯತೊಡಗಿದರು ಹಾಗೂ ಒಂದು ಪತ್ರಿಕೆಯನ್ನೂ ಸಂಪಾದಿಸಿದರು.  ‘ಗ್ರೂಪಾ ಕ್ರಾಕೊವ್ಸ್‌ಕಾ’ ಅಂಬ ಹೆಸರಿನ ಸಾಹಿತ್ಯ ಸಮೂಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.   ಆ ವ್ಶವಿಟ್ಜ಼-ನ ( Auschwitz ) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರುಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ  ಆ ಕಾರ ಕೊಟ್ಟರು ಇವರು.  ಅವರ ನಿರಾಕರಣವಾದ ಮತ್ತು ಅಭಿವ್ಯಕ್ತಿಶೀಲ ಹಾಗೂ ದುರಂತ ಕಾವ್ಯದ ಶೈಲಿಗಾಗಿ ಅವರು ಪಾಶ್ಚಾತ್ಯ ಕಾವ್ಯಪ್...

ಆಡಮ್ ಜಾಗಯೆವ್‌ಸ್ಕಿ-ಯವರ ಐದು ಕವನಗಳು - FIVE POEMS BY THE POLISH POET ADAM ZAGAJEWSKI TRANSLATED INTO KANNADA

ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ, ಪ್ರಬಂಧಕಾರ, ಹಾಗೂ ಅನುವಾದಕರೂ ಆಗಿದ್ದರು.   ಜಾಗಯೆವ್‌ಸ್ಕಿಯವರ ಸುಮಾರು 13 ಕವನ ಸಂಕಲನಗಳು ಪ್ರಕಟವಾಗಿವೆ ಹಾಗೂ ಅವರ ಕವನಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ಅವರ ಸಾಹಿತ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮನ್ನಣೆಗಳು ಸಂದಿವೆ. ಜಾಗಯೆವ್‌ಸ್ಕಿಯವರ ಕವನಗಳಲ್ಲಿ ರಾತ್ರಿ, ಕನಸುಗಳು, ಇತಿಹಾಸ ಮತ್ತು ಸಮಯ, ಅನಂತತೆ ಮತ್ತು ನಿತ್ಯತೆ, ನಿಶ್ಶಬ್ಧ, ಮರಣ, ಇವು ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳು.   ಕಳೆದ ತಿಂಗಳು, ಅಂದರೆ 21 ಮಾರ್ಚ 2021 ರಂದು ಜಾಗಯೆವ್‌ಸ್ಕಿಯವರು ನಿಧನರಾದರು. ಕಾಕತಾಳಿಯವೆಂಬಂತೆ, 21 ಮಾರ್ಚ ವಿಶ್ವ ಕಾವ್ಯ ದಿನ. ಇಲ್ಲಿರುವ ಅವರ ಐದು ಕವನಗಳ ಕನ್ನಡಾನುವಾದ ಅವರ ನೆನಪಿಗೆ, ಕಾವ್ಯ ಪ್ರತಿಭೆಗೆ ಒಂದು ಸಣ್ಣ ಗೌರವ. ಈ ಕವನಗಳನ್ನು ಕ್ಲೇರ್ ಕಾವಾನರವರು (Clare Cavanagh) ಪೋಲಿಷ್-ನಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನಾನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವೆ.   LINK TO THE KANNADA TRANSLATIONS IN AVADHI MAG: https://avadhim...