ಬಲ್ಗೇರಿಯಾ ದೇಶದ ಕವಿ ಕ್ರಿಸ್ಟಿನ್ ಡಿಮಿಟ್ರೋವಾ-ರವರ ಏಳು ಕವನಗಳು SEVEN POEMS BY THE BULGARIAN POET KRISTIN DIMITROVA TRANSLATED INTO KANNADA
29 JUNE 2023
ಕ್ರಿಸ್ಟಿನ್ ಡಿಮಿಟ್ರೋವಾ ಅವರು ಒಂದು ವಿಶಿಷ್ಟ ಶೈಲಿ ಮತ್ತು ಸಾಹಿತ್ಯಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡ ನಿಪುಣ ಕವಿ. ದೈನಂದಿನ ಜೀವನದ ಪರಿಚಿತ ಪರಿಸರದಲ್ಲಿ ಹೊಸ ಮತ್ತು ಅನಿರೀಕ್ಷಿತ ದೃಷ್ಟಿಕೋನಗಳನ್ನು ಅನ್ವೇಷಿಸುವುದು ಅವರ ಕಾವ್ಯ ಬರವಣಿಗೆಯ ಮೊದಲ ಹಂತ. ಈ ಪರಿಸರದಲ್ಲೇ ಅವರು ವಾಸ್ತವವನ್ನು ಹೊಸತಾಗಿ ನೊಡುತ್ತಾರೆ. ಡಿಮಿಟ್ರೋವಾ ಅವರ ಆರಂಭಿಕ ಕಾವ್ಯವು ರಸ್ತೆಯಿಂದ ತನ್ನ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯುತ್ತದೆ. ಕಮ್ಯುನಿಸಂನಿಂದ ಪ್ರಜಾಪ್ರಭುತ್ವದ ಸಮಾಜದತ್ತ ಸಾಗುವ ರಾಜಕೀಯ ರೂಪಾಂತರದ ಪಯಣದಲ್ಲಿ ಭರವಸೆ, ಉತ್ಸಾಹ ಮತ್ತು ಪ್ರತಿಭಟನೆಗಳ ಮುಖ್ಯ ವೇದಿಕೆಯಾಗಿತ್ತು ಈ ರಸ್ತೆ. ಬಲ್ಗೇರಿಯನ್ ಕಾವ್ಯದ ಹೊಸ ಅಲೆಯನ್ನು ಬದಲಾಗುತ್ತಿರುವ ವಾಸ್ತವತೆಯು ಹಿಂದಿನ ಸಾಹಿತ್ಯದಲ್ಲಿದ್ದ ಕ್ಲೀಷೆಗಳು, ವಾಕ್ಚಾತುರ್ಯ ಮತ್ತು ಮರುಕಧ್ವನಿಗಳನ್ನು ತ್ಯಜಿಸಲು ಪ್ರಚೋದಿಸುತ್ತದೆ; ಹಾಗೆಯೇ ನಿಜವಾದ ಮೌಲ್ಯಗಳಿಗಾಗಿ ನಿರಂತರ ಅನ್ವೇಷಣೆಯ ಆರಂಭಿಕ ಹಂತವಾಗಿ ನಮ್ಮ ಸುತ್ತಲಿನ ವಸ್ತುಗಳ ಮೂಲಭೂತ ಕ್ರಮಗಳು ಮತ್ತು ಸ್ವರೂಪಗಳಿಗೆ ಮರಳಲು ಸಹ ಪ್ರಚೋದಿಸುತ್ತದೆ. ಇದು ಸಾಂಪ್ರದಾಯಿಕ ವಾಸ್ತವಿಕತೆಯೆಡೆಗೆ ಯಾವುದೇ ರೀತಿಯಲ್ಲಿ ಮತ್ತೆ ಹಿಂತಿರುಗುವ ಪಯಣವಲ್ಲ, ಇದು ಕಾವ್ಯಾತ್ಮಕ ಸ್ಫೂರ್ತಿ ಮತ್ತು ಅದೇ ಸಮಯದಲ್ಲಿ ಸಾಂಪ್ರದಾಯಿಕ ರೂಪಗಳು ಮತ್ತು ಭಾಷೆಯ ಡಿರೊಮ್ಯಾಂಟಿಸೈಸೇಶನ್ ಎರಡಕ್ಕೂ ಮೂಲವಾಗಿದೆ. ಪದರುಗಳ ಕಲಾತ್ಮಕ ಮಿಶ್ರಣ, ಲಘುಗೀತೆಯಂತಹ ಲಯಗಳು ಮತ್ತು ಬಾಲೋಚಿತ ಪುನರಾವರ್ತನೆಗಳ ಸಂಯೋಜನೆ, ವಿಭಿನ್ನ ದೃಷ್ಟಿಕೋನಗಳ ಘರ್ಷಣೆ – ಸಾಮಾನ್ಯ ಮತ್ತು ಅಸಾಮಾನ್ಯ, ಕನಸುಗಳು ಮತ್ತು ವಾಸ್ತವ – ಇವೆಲ್ಲವೂ ಡಿಮಿಟ್ರೋವಾ ಅವರ ಕಾವ್ಯಾತ್ಮಕ ಶೈಲಿಯ ಶ್ರೀಮಂತ ಸಂಯೋಜನೆಯನ್ನು ನಿರ್ಮಿಸುತ್ತವೆ.
ಡಿಮಿಟ್ರೋವಾ ಅವರು ತಮ್ಮ ಕವನಗಳಲ್ಲಿ ವಿಷಯಗಳ ಪೂರ್ಣವ್ಯಾಪ್ತಿಯನ್ನು ಹಂತಹಂತವಾಗಿ ವಾಕ್ಚತುರ್ಯ ಮತ್ತು ವ್ಯಂಗ್ಯವನ್ನು ಸೇರಿಸುತ್ತಾ, ವಿಸ್ತರಿಸುತ್ತಾ ಹೋಗುತ್ತಾರೆ. “ಉತ್ತರಕ್ಕಾಗಿ ಹುಡುಕಾಟ” ಕವನದಲ್ಲಿ ನಾಯಕನು ನಿಸರ್ಗಶಕ್ತಿಗಳನ್ನು (ಗಾಳಿ, ಭೂಮಿ, ಬೆಂಕಿ ಮತ್ತು ನೀರು) ಕೇಳುತ್ತಾನೆ, “ನಾನು ಯಾಕೆ ಇಲ್ಲಿದ್ದೇನೆ?” ಎಲ್ಲೂ ಉತ್ತರ ಸಿಗುವುದಿಲ್ಲ. ಬಾವಿಯಲ್ಲಿರುವ ನೀರು ಮಾತ್ರ ಉತ್ತರಿಸುತ್ತೆ, “ಕೆಳಗಿಳಿದು ಬಾ ನನ್ನತ್ತ, ಹೇಳುವೆ”, ಅಂತ. “ಸುಮ್ಮನೆ ತಮಾಷೆಗೆ ಕೇಳಿದೆ” ಎಂದು ಹೇಳಿ ನಾಜೂಕಾಗಿ ಹಿಮ್ಮೆಟ್ಟುತ್ತಾನೆ. “ಮಿರರ್ಸ್” ಎಂಬ ಕವನದಲ್ಲಿ ಬರುವ ಕನ್ನಡಿಯು ಹೊರಗೆ ನೋಡಲು ಇರುವ ಕಿಟಕಿಯಂತೆಯೂ ಹೌದು, ನಮ್ಮ ಒಳಗೆ ನಾವು ನೋಡಿಕೊಳ್ಳುವುದಕ್ಕೆ ಇರುವ ಕಟಕಿಯೂ ಹೌದು, ಒಂದನ್ನೊಂದು ಗುರುತಿಸಿದ ನೆರಳುಗಳ ಹಾಗೂ ಸ್ವಬಿಂಬಗಳ ಜಾಲದೆಡೆಗಿನ ಕಿಟಕಿಯೂ ಹೌದು.
ಕವಿತಾ ರಚನೆಯ ಜತೆ ಕ್ರಿಸ್ಟಿನ್ ಡಿಮಿಟ್ರೋವಾ ಅವರ ಮೊದಲ ಮುಖಾಮುಖಿ, ಅವರ ಪ್ರಕಾರ, ತುಂಬಾ ಹೆಮ್ಮೆಪಡುವಂತಹದ್ದಾಗಿರಿಲಿಲ್ಲ. “ನನ್ನ ಮೊದಲ ಆರು ಕವನಗಳನ್ನು ಬಲ್ಗೇರಿಯನ್ ಭಾಷೆಯಲ್ಲೇ ಬರೆದೆ; ಈಗಲೂ ಈ ಕವನಗಳಲ್ಲಿ ನನಗೆ ಯಾವುದೂ ಇಷ್ಟವಿಲ್ಲ. ಬರೆಯಲು ಪ್ರಾರಂಭಿಸುವುದು ನನಗೆ ಕಷ್ಟವಾಯಿತು. ನಾನು ಯಾವಾಗಲೂ ಆಶ್ಚರ್ಯಪಡುತ್ತಿದ್ದೆ, ಜನರು ಕವಿತೆಯ ಬಗ್ಗೆ ಹೇಗೆ ಯೋಚಿಸುತ್ತಾರೆ? ಕವಿತೆ ಎಲ್ಲಿ ಕಾಣಿಸಿಕೊಳ್ಳುತ್ತದೆ? ಅದು ಈಗಾಗಲೇ ಅವರ ಮನಸ್ಸಿನಲ್ಲಿದೆಯೇ ಅಥವಾ ಅದು ಯಾವುದೋ ಒಂದು ನೆನಪಿನಿಂದ ಹುಟ್ಟುತ್ತದೆಯೆ?”
ಕಾವ್ಯದ ಜತೆಗಿನ ಈ ಅಸ್ಥಿರ ಆರಂಭವನ್ನು ಬದಿಗಿಟ್ಟು, ಡಿಮಿಟ್ರೋವಾ ಗದ್ಯ ಪ್ರಕಾರವನ್ನು ಅನ್ವೇಷಿಸಲು, ಗದ್ಯ ಬರೆಯಲು ತೊಡಗಿದರು. “ನನಗೆ ಗದ್ಯದ ಅವಶ್ಯಕತೆ ಇದೆ ಎಂದು ಅನಿಸಿತು. ಕಾವ್ಯ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದು. ಮೊದಲಿಗೆ, ನಿಮಗೆ ಕಾವ್ಯವೇ ಬೇಕು ಅಂತನಿಸುತ್ತದೆ, ಆದರೆ ಕ್ರಮೇಣ ಅದು ನಿಮ್ಮನ್ನು ಖಿನ್ನತೆಯೆಡೆಗೆ ಎಳೆಯುತ್ತದೆ. ಗದ್ಯದ ಜತೆ ಹೀಗಾಗುವುದಿಲ್ಲ, ಬಹುಶಃ ಅದಕ್ಕಾಗಿಯೇ ನನ್ನ ಕಲ್ಪನೆಯು ಗದ್ಯದಿಂದ ಪ್ರಾರಂಭವಾಗುತ್ತದೆ”.
ಅವರು ತನ್ನನ್ನು ಹೇಗೆ ನೋಡುತ್ತಾರೆ? “ನನ್ನನ್ನು ಪೋಸ್ಟ್-ಮಾಡರ್ನಿಸ್ಟ್ ಎಂದು ನೋಡಲಾಗಿದೆ, ಆದರೆ ನಾನು ʻಪೋಸ್ಟ್-ಮಾಡರ್ನಿಸ್ಟ್ʼ ಎಂಬುದು ನನಗೆ ಖಚಿತವಿಲ್ಲ. ನಾನು ಬರೆಯುವಾಗ ಯಾವುದೋ ಪರಿಕಲ್ಪನೆಯನ್ನಿಟ್ಟುಕೊಂಡು ಎಂದಿಗೂ ಪ್ರಾರಂಭಿಸುವುದಿಲ್ಲ. ನನ್ನ ಮನಸ್ಸಿನಲ್ಲಿ ಉಳಿದುಹೋದ ಯಾವುದೋ ಸಣ್ಣ ವಿಷಯದೊಂದಿಗೆ ನಾನು ಪ್ರಾರಂಭಿಸುತ್ತೇನೆ. ಈ ವಿರೋಧಾಭಾಸ ನನಗೆ ಆಕರ್ಷಕವೆಂದನಿಸುತ್ತದೆ”.
1963ರಲ್ಲಿ ಜನಿಸಿದ ಕ್ರಿಸ್ಟಿನ್ ಡಿಮಿಟ್ರೋವಾ, ಬಲ್ಗೇರಿಯಾದ ಸೋಫಿಯಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಮತ್ತು ಅಮೆರಿಕನ್ ಅಧ್ಯಯನಗಳಲ್ಲಿ ಪದವಿ ಪಡೆದು, ಅದೇ ಯೂನಿವರ್ಸಿಟಿಯ ವಿದೇಶಿ ಭಾಷೆಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 2004ರಿಂದ 2006ರವರೆಗೆ, ಅವರು ಕಲೆ ಮತ್ತು ಸಂಸ್ಕೃತಿಯ “ಟ್ರುಡ್ ಡೈಲಿ”ಯ ಸಾಪ್ತಾಹಿಕ ಪುರವಣಿ, “ಆರ್ಟ್ ಟ್ರಡ್”ನ ಸಂಪಾದಕರಾಗಿದ್ದರು ಮತ್ತು 2007-2008ರಲ್ಲಿ “ಕ್ಲಾಸಾ ಡೈಲಿ”ಯಲ್ಲಿ ಅಂಕಣಕಾರರಾಗಿದ್ದರು.
ಅವರ ಕವನಸಂಕಲನಗಳಲ್ಲಿ ಮುಖ್ಯವಾದವು ʻಜಾಕೋಬ್ಸ್ ಥರ್ಟೀನ್ತ್ ಚೈಲ್ಡ್ʼ (Jacob’s Thirteenth Child 1992), ʻಎ ಫೇಸ್ ಅಂಡರ್ ದಿ ಐಸ್ʼ (A Face Under the Ice 1997), ʻಕ್ಲೋಸ್ಡ್ ಫಿಗರ್ಸ್ʼ (Closed Figures 1998), ʻಫೇಸಸ್ ವಿತ್ ಟ್ವಿಸ್ಟೆಡ್ ಟಂಗ್ಸ್ʼ (Faces with Twisted Tongues 1998), ʻತಾಲಿಸ್ಮನ್ ರಿಪೇರ್ಸ್ʼ (Talisman Repairs 2001), ʻದಿ ಪೀಪಲ್ ವಿಥ್ ದಿ ಲ್ಯಾಂಟರ್ನ್ಸ್ʼ (The People with the Lanterns 2003), ʻಕಾರ್ಡ್‌ಪ್ಲೇಯರ್ಸ್ ಮಾರ್ನಿಂಗ್ʼ (The Cardplayer’s Morning 2008), ಮತ್ತು ʻದಿ ಗಾರ್ಡನ್ ಆಫ್ ಎಕ್ಸ್‌ಪೆಕ್ಟೇಷನ್ಸ್ ಅಂಡ್ ದಿ ಆಪೋಸಿಟ್ ಡೋರ್ʼ (The Garden of Expectations and the Opposite Door2012). ಅವರ ಆಯ್ದ ಕವನಗಳ ಎರಡು ಸಂಕಲನಗಳು ಇಂಗ್ಲಿಷ್ ಅನುವಾದದಲ್ಲಿ ಪ್ರಕಟವಾಗಿವೆ: ʻಎ ವಿಸಿಟ್ ಟು ದಿ ಕ್ಲಾಕ್‌ಮೇಕರ್ʼ (A Visit to the Clockmaker 2005) ಮತ್ತು ʻಮೈ ಲೈಫ್ ಇನ್ ಸ್ಕ್ವೇರ್ಸ್ʼ (My Life in Squares 2010). ಅವರ ಕಾದಂಬರಿ, ʻಸಬಾಜಿಯಸ್ʼಗೆ (Sabazius 2007), ರಾಷ್ಟ್ರೀಯ ಹ್ರಿಸ್ಟೊ ಜಿ. ಡಾನೋವ್ ಪ್ರಶಸ್ತಿ ನೀಡಲಾಯಿತು, ಕ್ಯಾನೆಟ್ಟಿ ಪ್ರಶಸ್ತಿಗೆ ಆಯ್ಕೆಯಾಯಿತು, ಮತ್ತು ಸ್ಪ್ಯಾನಿಷ್, ಜರ್ಮನ್, ರಷ್ಯನ್ ಮತ್ತು ರೊಮೇನಿಯನ್ ಭಾಷೆಗಳಿಗೆ ಅನುವಾದಗೊಂಡಿತು. ಡಿಮಿಟ್ರೋವಾ ಅವರು ಎರಡು ಸಣ್ಣ ಕಥೆಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ: ʻಲವ್ ಅಂಡ್ ಡೆತ್ ಅಂಡರ್ ದಿ ಕ್ರೂಕ್ಡ್ ಪಿಯರ್ ಟ್ರೀಸ್ʼ (Love and Death under the Crooked Pear Trees 2004) ಮತ್ತು ʻದಿ ಸೀಕ್ರೆಟ್ ವೇ ಆಫ್ ದಿ ಇಂಕ್ʼ (The Secret Way of the Ink 2010).
ಕ್ರಿಸ್ಟಿನ್ ಡಿಮಿಟ್ರೋವಾ ಅವರ ಕವನಸಂಕಲನಗಳಿಗಾಗಿ ಐದು, ಕಾದಂಬರಿಗಳಿಗಾಗಿ ಮೂರು ಮತ್ತು ಜಾನ್ ಡನ್ ಮತ್ತು ಲೂವಿಸ್ ಕ್ಯಾರಲ್ ಅವರ ಕವನಗಳ ಬಲ್ಗೇರಿಯನ್ ಭಾಷೆಯ ಅನುವಾದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಡಿಮಿಟ್ರೋವಾ ಅವರ ಕವನಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳನ್ನು ಒಟ್ಟು 27 ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು 35 ದೇಶಗಳಲ್ಲಿ ಪ್ರಕಟಿಸಲಾಗಿದೆ.
ಕ್ರಿಸ್ಟಿನ್ ಡಿಮಿಟ್ರೋವಾ ಅವರು ತಮ್ಮ ಕಾವ್ಯದಲ್ಲಿ ವಿಲಕ್ಷಣ ಹಾಸ್ಯ, ಜಾಣ್ಮೆ, ವ್ಯಂಗ್ಯ, ವಾಕ್ಚಾತುರ್ಯ, ಸಂಭಾಷಣೆಯಂತಹ ಅಂಶಗಳನ್ನು ತೆರೆದ ಶೈಲಿಯಲ್ಲಿ ಬಳಸಿಕೊಳ್ಳುತ್ತಾರೆ. ನಿರಂತರವಾಗಿ ನಿರೀಕ್ಷೆಗಳನ್ನು ಹಿಮ್ಮೆಟ್ಟಿಸುವ, ತೀಕ್ಷ್ಣವಾದ ಪ್ರತ್ಯೇಕತೆಯ ಚೇತೋಹಾರಿ ಕಾವ್ಯ ಇವರದ್ದು. 1990ರ ದಶಕದ ಆರಂಭದಲ್ಲಿ ಹೊರಹೊಮ್ಮಲು ಪ್ರಾರಂಭಿಸಿದ ಹೊಸ ಬಲ್ಗೇರಿಯನ್ ಕಾವ್ಯದ ಪ್ರಮುಖ ಧ್ವನಿ ಇವರು; ನಿಸ್ಸಂದೇಹವಾಗಿಯೂ, ಇವರು ಮೊದಲ ಶ್ರೇಣಿಯ ಕವಿ.
ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿನ ಏಳು ಕವನಗಳಲ್ಲಿ ಮೊದಲ ನಾಲ್ಕು ಕವನಗಳನ್ನು ಗ್ರೆಗರಿ ಒʻಡೊನಹ್ಯೂ (Gregory O’Donoghue), ಹಾಗೂ ಉಳಿದ ಮೂರು ಕವನಗಳನ್ನು ಟಾಮ್ ಫಿಲಿಪ್ಸ್ ಅವರು (Tom Phillips) ಬಲ್ಗೇರಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.
LINK TO MY KANNADA TRANSLATIONS OF KRISTIN DIMITROVA'S POEMS PUBLISHED IN AVADHI MAG

Comments
Post a Comment